ಜೇಕಬಿನಿಯ
	ಸುಂದರವಾದ ಹೂಬಿಡುವ ಒಂದು ಅಲಂಕಾರ ಸಸ್ಯ. ಕೆಂಪು, ಕಿತ್ತಳೆ, ಅಥವಾ ಹಳದಿ ಬಣ್ಣದ ಮತ್ತು ನಳಿಕೆಯಂತಿರುವ ಚೆಲುವಾದ ಹೂಗಳಿಗೋಸ್ಕರ ಉದ್ಯಾನಗಳಲ್ಲಿ ಬೆಳೆಸಲಾಗುತ್ತದೆ. ಅಕ್ಯಾಂತೇಸೀ ಕುಟುಂಬಕ್ಕೆ ಸೇರಿದೆ. ಇದರಲ್ಲಿ 20-40 ಪ್ರಭೇದಗಳುಂಟು. ಎಲ್ಲ ಪ್ರಭೇದಗಳ ತವರೂ ದಕ್ಷಿಣ ಅಮೆರಿಕವೇ. ಇವು ರೋಮರಹಿತ ಮೂಲಿಕೆಗಳು ಇಲ್ಲವೆ ಪೊದೆಗಳು. ಎಲೆಗಳು ಸರಳ ; ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿವೆ. ಹೂಗಳು ಕೆಲವೊಮ್ಮೆ ಒಂಟೊಂಟಿಯಾಗಿಯೂ ಕೆಲವೊಮ್ಮೆ ಸಂಕೀರ್ಣ ಎಲ್ಲವೆ ಕದಿರು ಮಾದರಿಯ ಗೊಂಚಲುಗಳಲ್ಲಿಯೂ ಅರಳುತ್ತವೆ. ಹೂ ಅರಳುವ ಕಾಲ ಕೆಲವು ಪ್ರಭೇದಗಳಲ್ಲಿ ಚಳಿಗಾಲವಾದರೆ ಇನ್ನು ಕೆಲವರಲ್ಲಿ ಬೇಸಿಗೆ. ಪುಷ್ಪಪತ್ರಗಳು 5. ದಳಗಳು 5 ಕಿರಿದಾದ ಕೊಳವೆಯ ರೀತಿಯಲ್ಲಿ ಕೂಡಿ ಕೊಂಡಿವೆ. ದಳಸಮೂಹದ ಬಾಯಿ ಇರ್ತುಟಿ ಬಗೆಯದು, ಕೇಸರಗಳು 2. ಪರಾಗ ಕೋಶದ ಬುಡದಲ್ಲಿ ಉಪಾಂಗಗಳು ಅಥವಾ ಚುಚ್ಚುಮುಳ್ಳುಗಳು (ಸ್ಟರ್ಸ) ಉಂಟು. ಈ ಲಕ್ಷಣದಲ್ಲಿ ತನ್ನನ್ನು ಉಳಿದೆಲ್ಲ ರೀತಿಯಲ್ಲೂ ಹೋಲುವ ತನ್ನ ಹತ್ತಿರಸಂಬಂಧಿಯಾದ ಜಸ್ಟೀಸಿಯ ಎಂಬ ಗಿಡದಿಂದ ಜೇಕಬಿನಿಯ ಭಿನ್ನವಾಗಿದೆ. ತೋಟಗಾರಿಯೆಕೆಯಲ್ಲಿ ಇದನ್ನು ಜಸ್ಟೀಸಿಯ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.

	ಜೇಕಬಿನಿಯವನ್ನು ಸಾಮಾನ್ಯವಾಗಿ ಲತಾಗೃಹಗಳ ನೆರಳಿನಲ್ಲಿ ಬೆಳೆಸಲಾಗುತ್ತದೆ. ತುಂಡುಗಳಿಂದ ವೃದ್ದಿಸುವುದೇ ವಾಡಿಕೆಯ ಕ್ರಮ. 2/3 ಭಾಗಗೋಡು, 1/3 ಭಾಗ ಕೊಳೆತ ಸಸ್ಯ ಮತ್ತು ಸಾಕಷ್ಟು ಪರಿಮಾಣದ ಮರಳುಗಳ ಮಿಶ್ರಣಗಳನ್ನು ಕುಂಡಗಳಿಗೆ ತುಂಬಿ ತುಂಡುಗಳನ್ನು ನೆಟ್ಟು ಬೆಳಸಲಾಗುತ್ತದೆ. ಮಣ್ಣು ಯಾವಾಗಲೂ ಹಸಿಯಾಗಿರಬೇಕು. 	ಉದ್ಯಾನಗಾರಿಕೆಯಲ್ಲಿ ಅತ್ಯಂತ ಹೆಸರುವಾಸಿಯಾಗಿರುವ ಪ್ರಭೇದಗಳು ಇವು: ಕಾರ್ನಿಯ, ಪೋಲಿಯಾನ, ಕಾಕ್ಸನಿಯ, ಕ್ರೈಸೊಸ್ಟಿಫ್ಯಾನ, ವಾಸಿಫ್ಲೋರ, 
(ಎಸ್.ಐ.ಎಚ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ